ಕಂಚುವಾಳ : ಲೆಗ್ಯುಮಿನೋಸೀ ಕುಟುಂಬದ ಸಿಸಾಲ್ವಿನೀ ಉಪಕುಟುಂಬಕ್ಕೆ ಸೇರಿದ ಒಂದು ಬಹುವಾರ್ಷಿಕ ಸಸ್ಯಜಾತಿ. ಇದರಲ್ಲಿ ಸು. 250 ಪ್ರಭೇದಗಳಿವೆ. ಅವುಗಳಲ್ಲಿ ಪೊದರು, ಅಡರುಬಳ್ಳಿ ಮತ್ತು ಮರ ಇತ್ಯಾದಿಗಳೆಲ್ಲ ಇವೆ. ಭಾರತದಲ್ಲಿ ಮುಖ್ಯವಾಗಿ ಬೌಹಿನಿಯ ಪಪುರ್ಯ್‌ರಿಯ (ಕಂಚುವಾಳ ಮರ), ಬಾ.ವಾಹ್ಲಿ (ಬಿಳೀ ಕಂಚುವಾಳ ಅಥವಾ ಕಂಬಿಹೂ), ಬಾ.ವೇರಿಗೇಟ(ಉಳಿಪೆ), ಬಾ.ಮಲಬಾರಿಕ (ಬಸವನ ಪಾದ) ಮತ್ತು ಬಾ.ಟೊಮೆಂಟೋಸ (ಆನೆಪಾದ) ಪ್ರಭೇದಗಳು ಬೆಳೆಯುತ್ತವೆ. ಭಾರತ ಮತ್ತು ಚೀನದೇಶಗಳ ಮೂಲನಿವಾಸಿಯಾದ ಕಂಚುವಾಳ ಮರವನ್ನು ರಸ್ತೆಗಳ ಪಕ್ಕದಲ್ಲೂ ಮನೆಗಳ ಆವರಣಗಳಲ್ಲೂ ಉದ್ಯಾನವನಗಳಲ್ಲೂ ಬೆಳೆಸುವುದುಂಟು.

ಇದು ಸು. 30' ಎತ್ತರ ಬೆಳೆಯುವ ಮಧ್ಯಮಗಾತ್ರದ ಸದಾ ಹಸಿರಾಗಿರುವ ಮರ. ಎಲೆ 3" ರಿಂದ 6" ಉದ್ದ. ಆಕಾರ ಕರನೆಯಂತೆ. ಅಂಚು ನಯ. ತುದಿಯಿಂದ ಅರ್ಧಭಾಗದವರೆಗೆ ಮಧ್ಯದಲ್ಲಿ ಸೀಳಿರುವುದು ಇದರ ವೈಶಿಷ್ಟ್ಯ. ಈ ಸಸ್ಯ ಸೆಪ್ಟೆಂಬರ್ ತಿಂಗಳಿನಿಂದ ಡಿಸೆಂಬರ್ ತಿಂಗಳವರೆಗೆ ಹೂ ಬಿಡುತ್ತದೆ. ಬಿಳುಪು ಅಥವಾ ಕೆಂಪುಬಣ್ಣದ ಅಂತ್ಯಾರಂಭಿ ಹೂಗೊಂಚಲು ಬಹಳ ಸುಂದರವಾಗಿದೆ; ಕೇಸರುಗಳು 10. ಇವುಗಳಲ್ಲಿ 3-4 ಮಾತ್ರ ಫಲವತ್ತಾಗಿವೆ; ಉಳಿದವು ಬರಡು; ಅಂಡಾಶಯ ಬಹು ಅಂಡಕಗಳನ್ನೊಳಗೊಂಡ ಉಚ್ಚ ಮಾದರಿಯದು. ಫಲ ಬಹುಬೀಜವಿರುವ ಸು.1' ಉದ್ದದ ಪಾಡ್ ಮಾದರಿಯದು.

ಕಂಚುವಾಳ ಮರವನ್ನು ಬೀಜಗಳಿಂದ ವೃದ್ಧಿಮಾಡಬಹುದು. ಇದರ ಕಾಂಡದಲ್ಲಿ ಸಿಕ್ಕುವ ಗೋಂದಿಗೆ ವಾಣಿಜ್ಯ ಪ್ರಾಮುಖ್ಯವಿದೆ. ಚೌಬೀನೆ ಕಂದು ಬೂದು ಮಿಶ್ರಿತ ಬಣ್ಣದ್ದು; ಹಗುರ ಮತ್ತು ಮೃದು. ಗೆದ್ದಲು ಮತ್ತು ಕುಟ್ಟೆ ಹುಳು ತಿಂದುಹಾಕುವುದು ಸಾಮಾನ್ಯ. ವ್ಯವಸಾಯೋಪಕರಣಗಳ ತಯಾರಿಕೆಯಲ್ಲೂ ಬಡವರು ಒಮ್ಮೊಮ್ಮೆ ಮನೆ ಕಟ್ಟಲೂ ಇದನ್ನು ಬಳಸುವರು. ಹೂವನ್ನು ತರಕಾರಿಯಾಗಿ ಮತ್ತು ಉಪ್ಪಿನಕಾಯಿಗಳಲ್ಲಿ ಉಪಯೋಗಿಸುವುದೂ ಉಂಟು. ಗೋಂದನ್ನು ಬಟ್ಟೆ ಮತ್ತು ಕಾಗದದ ತಯಾರಿಕೆಯಲ್ಲಿ ಉಪಯೋಗಿಸುವರು. ಬೇರು, ಕಾಂಡದ ತೊಗಟೆ ಮತ್ತು ಹೂಗಳನ್ನು ಸ್ಥಳೀಯ ಔಷಧಿಗಳಲ್ಲಿ ಉಪಯೋಗಿಸುತ್ತಾರೆ. ಬೇರುಗಳ ಮೇಲಿನ ತೊಗಟೆ ವಿಷಪುರಿತವಾದದ್ದು. ಎಲೆಗಳು ದನಕರುಗಳಿಗೆ ಒಳ್ಳೆಯ ಆಹಾರ.

ವಾಹ್ಲಿ (ಬಿಳೀ ಕಂಚುವಾಳ) ಎಂಬ ಪ್ರಭೇದ ಒಂದು ಭೀಷ್ಮ ಬಳ್ಳಿ. ನಮ್ಮ ದೇಶದ ಕಾಡುಗಳಲ್ಲಿ ಬೆಳೆಯುತ್ತದೆ. ಬಳ್ಳಿಯ ನಾರನ್ನು ಹಗ್ಗವಾಗಿ ಉಪಯೋಗಿಸುವರು. ಬೀಜಗಳು ಗೇರುಬೀಜದ ರುಚಿ ಕೊಡುವುದರಿಂದ ಹುರಿದು ತಿನ್ನುವುದುಂಟು. ಎಲೆ ಅಗಲವಾಗಿರುವುದರಿಂದ ತಿಂಡಿ ತಿನ್ನಲೂ ಊಟ ಮಾಡಲೂ ಗುಡಿಸಿಲ ಮೇಲ್ಛಾವಣೆಗೆ ಹೊದಿಸಲೂ ಬರುತ್ತದೆ

ಇನ್ನೊಂದು ಪ್ರಭೇದವಾದ ವೇರಿಗೇಟ (ಉಳಿಪೆ) ಎಂಬುದು ಸು. 10-15 ಮೀ ಎತ್ತರ ಬೆಳೆದು ಬೇಸಗೆಯಲ್ಲಿ ಹೂಬಿಡುತ್ತದೆ. ಇದನ್ನು ಉದ್ಯಾನವನಗಳಲ್ಲಿ ಗಿಡವಾಗಿ ಬೆಳೆಸುವರು. ಗೋಂದು ಚೆರಿ ಗೋಂದಿನಂತಿದೆ. ವಿವಿಧ ಬಣ್ಣಗಳನ್ನು ಕಟ್ಟಲು ತೊಗಟೆಯನ್ನು ಬಳಸಲಾಗುವುದು.
ಬಿಳಿಯ ಹೂಬಿಡುವ ಬಾಹಿನಿಯ ಆಲ್ಪ, ಬಾ.ಕ್ಯಾಂಡಿಡ, ಬಾ.ಹುಕರಿ, ಬಾ.ಅಕ್ಯುಮಿನೇಟ ಪ್ರಭೇದಗಳನ್ನೂ ಕಗ್ಗೆಂಪು ಹೂ ಬಿಡುವ ಬಾ.ಗಾಲ್ಪಿನಿ ಪ್ರಭೇದವನ್ನೂ ಅಲಂಕಾರಕ್ಕೋಸ್ಕರ ಉದ್ಯಾನಗಳಲ್ಲಿ ಬೆಳೆಸುವುದೂ ಉಂಟು.	(ಎಚ್.ಎನ್.ಸಿ.; ಬಿ.ಎ.ಸಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ